ವಾಚಕರೆ, ಕರ್ನಾಟಕ ರಾಜ್ಯದ ಕಿರೀಟ ಎಂದೇ ಹೆಸರಾಗಿರುವ, ಉತ್ತರ-ಕರ್ನಾಟಕದ ತುದಿ ಎಂದೇ ಅನಿಸಿರುವ ಬೀದರ್ ಜಿಲ್ಲೆಯ ಬಗ್ಗೆ ತಿಳಿದುಕೋಳ್ಳೋಣ ಅಲ್ಲದೆ ಅಲ್ಲಿರುವ ಸುತ್ತಮುತ್ತಲಿನ ಪ್ರೇಕ್ಷಣಿಯ ಸ್ಥಳಗಳ ಬಗ್ಗೆ ಮಾಹಿತೀ ಪಡೆಯೋಣ.
ಬೀದರ್ :-
ಬೀದರ್ ಜಿಲ್ಲೆಯು ಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ಸರಿ ಸುಮಾರು 700 km ದೂರದಲ್ಲಿದೆ . ನಾವು ಬಸ್ ಮತ್ತು ಟ್ರೈನ್ ಮುಖಾಂತರ ಅಲ್ಲಿಗೆ ತಲುಪಬಹುದು. ಸುಮಾರು 12 ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ. ಉರ್ದು, ಕನ್ನಡ, ತೆಲುಗು ಮತ್ತು ಮರಾಠಿ ಗಳಂತಹ ಭಾಷೆಗಳ ಸಮ್ಮಿಶ್ರಣವನ್ನು ಮಾಡಿ ಒಂದು
ಅದ್ಭುತ ಗಡಿ ಭಾಷೆಯ ಕನ್ನಡ ವನ್ನು ಮಾತನಾಡಲಾಗುತ್ತದೆ. ಮಹಾರಾಷ್ಟ್ರ ಮತ್ತು ತೆಲಾಂಗಣ
ಕೇವಲ 30 km ದೂರದಲ್ಲಿದ್ದು ಹೈದರಾಬಾದ್ ನಿಂದ ಸುಮಾರು 150 km ಗಳ ದೂರದಲ್ಲಿದೆ.
೧೪ನೆ ಶತಮಾನದಲ್ಲಿ ಬಹುಮನಿ ಸುಲ್ತಾನರ ರಾಜ್ಯಧಾನಿ ಯಾಗಿದ್ದ ಬೀದರ್ ಜಿಲ್ಲೆಗೆ ಬೀದರ್ ಅಂತ ಹೆಸರು ಬಂದಿದ್ದು ಅಲ್ಲಿನ ಪುರಾತನ ಕಲೆಯಾದ ಬಿದ್ರಿ ಕರಕುಶಲತೆಯಿಂದ. ಇಂದಿಗೂ ಇಲ್ಲಿ ಬಿದ್ರಿ ಆಕೃತಿಗಳನ್ನು ಮಾಡಿ ಮಾರಾಟ ಮಾಡಲಾಗುತ್ತದೆ .
ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ
ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು
ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು
ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ
ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
ಬಿಸಿಲು ನಾಡು ಬಿದರಿನಲ್ಲಿ ತುಂಬಾ ತಂಪಾದ, ಅದ್ಭುತವಾದ, ಇತಿಹಾಸಮಯವಾದ ಪ್ರೇಕ್ಷಣಿಯ ಸ್ಥಳಗಳಿರುವುದು ಒಂದು ಸಂತೋಷಕರ ವಿಷಯ.ಬಹುಮನಿ ಸುಲ್ತಾನರು ಅಲ್ಲದೆ ಕಲ್ಯಾಣದ ಚಾಲುಕ್ಯರು ಸೇರಿ ಮುಂತಾದ ದೇವಸ್ಥಾನಗಳ ನಿರ್ಮಾಣ ಮಾಡಿರುವುದು ವಿಶೇಷ ಸಂಗತಿ. ಇತ್ತೀಚೆಗೆ ನಡೆದ ಸರ್ವೇ ಪ್ರಕಾರ ಬೀದರ್ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ 5ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೀದರ್ ನಲ್ಲಿ IAF Training Base ನೆಲೆಸಿರುವುದಲ್ಲದೆ , ನಗರದ ಮಧ್ಯ ಭಾಗದಲ್ಲಿ ರೈಲ್ವೆ ನಿಲ್ದಾಣವಿದೆ. KSRTC ಬಸ್ ನಿಲ್ದಾಣಕ್ಕೂ ಮತ್ತು ರೈಲ್ವೆ ನಿಲ್ದಾಣಕ್ಕೂ ಸುಮಾರು 2km ಗಳ ಅಂತರವಿದೆ . ಮಾಂಜ್ರಾ ನದಿಯು ಬೀದರ್ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಯಾಗಿದೆ. ಬೀದರ್ ನಿಂದ ಸುಮಾರು 15km ಅಂತರದಲ್ಲಿ ಕಾರಂಜ ಆಣೆಕಟ್ಟು ಕಟ್ಟಲಾಗಿದೆ .
ಭೇಟಿ ನಿಡಲೇ ಬೇಕಾದ ಬೀದರ್ ಜಿಲ್ಲೆಯ ಕೆಲವು ಪ್ರೇಕ್ಷಣಿಯ ಸ್ಥಳಗಳು :
ಗುರು ನಾನಕ ಝೀರ, ಪಾಪನಾಶ ಶಿವನ ದೇವಸ್ಥಾನ, ನರಸಿಂಹ ಝೀರ, ಬೀದರ ಕೋಟೆ, ಹುಮನಾಬಾದ್ ತಾಲೂಕಿನ ಮಾಣಿಕನಗರ್, ಬಸವಕಲ್ಯಾಣದ ಕೋಟೆ, ಅನುಭವ ಮಂಟಪ, ಬಸವೇಶ್ವರರ ಮಂದಿರ, ೧೦೮ ಅಡಿ ಎತ್ತರದ ಬಸವ ಮೂರ್ತಿ ಮತ್ತು ಅಮೃತಕುಂಡ.
ಗುರು ನಾನಕ ಝೀರ :
ಇದು ಸಿಕ್ಖರ ಪವಿತ್ರ ಸ್ಥಳವಾಗಿದ್ದು, ಇದನ್ನು ಗುರುದ್ವಾರ ಎಂದು ಕರೆಯಲಾಗುತ್ತದೆ. ಇ ಗುರುದ್ವಾರವು ಸಿಕ್ಖರ ಧಾರ್ಮಿಕತೆಗೆ ಮತ್ತು ಅವರ ಪರಂಪರೆಗೆ ಅನುಗುಣವಾಗಿ ನಿರ್ಮಿಸಲಾಗಿದ್ದು ಇದನ್ನು ಸಿಕ್ಖರ ಪ್ರಥಮ ಗುರುಗಳಾದ ಗುರು ನಾನಕರಿಗೆ ಅರ್ಪಿಸಲಾಗಿದೆ. ಗುರುದ್ವಾರದ ಒಳಗಡೇ ಪ್ರವೇಶಿಸಬೇಕಾದರೆ ಶಿರದ ಮೇಲೆ ವಸ್ತ್ರವನ್ನು ಕಡ್ಡಾಯವಾಗಿ ಧರಿಸತಕ್ಕದ್ದಲ್ಲದೆ , ಪಾದಗಳನ್ನು ನೀರಿನಲ್ಲಿ ನೆನೆಸಿ ಒಳಗಡೆ ಹೋಗುವ ಪರಂಪರೆಯನ್ನು ಅನುಸರಿಸಲಾಗುತ್ತದೆ. ಗುರುದ್ವಾರದ ಒಳಗಡೆ ಸಿಕ್ಖರ ಪವಿತ್ರ ಧರ್ಮಗ್ರಂಥವಾದ
"ಗುರು ಗ್ರಂಥ್ ಸಾಹೇಬ್" ಅನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಇತಿಹಾಸ : ಗುರುನಾನಕರು ಧರ್ಮ ಪ್ರಚಾರದ ಸಮಯದಲ್ಲಿ ಬೀದರ್ ಗೆ ಬಂದು ನೆಲೆಸಿದ್ದಲ್ಲದೆ , ತಮ್ಮ ದಿವ್ಯಜ್ಞಾನ ದಿಂದ ಬಳಿಗೆ ಬಂದ ಭಕ್ತರ ಕಷ್ಟ -ಕಾರ್ಪಣ್ಯಯಗಳನ್ನು ಬಗೆಹರಿಸಿದರು. ಬಯಲುಸೀಮೆಯ ಪ್ರದೇಶವಾದ ಬೀದರ ಜಿಲ್ಲೆಯಲ್ಲಿ ನೀರಿನ ಬರವಿದ್ದರಿಂದ ಎಲ್ಲ ಕಡೆ ನೀರಿಗಾಗಿ ಪರದಾಡುತ್ತಿದ್ದ ಸಮಯವದು. ಎಲ್ಲಿ ಬಾವಿ ತೊಡಿದರು ಕುಡಿಯಲು ಯೋಗ್ಯವಾದ ನಿರು ದೊರಕದಾಗಿತ್ತಂತೆ . ಆ ಸಮಯದಲ್ಲಿ ಗುರುನಾನಕರು ಬೆಟ್ಟದ ಒಂದು ಭಾಗಕ್ಕೆ ಬಂದು ದೇವರ ನಾಮಸ್ಮರಣೆ ಮಾಡುತ್ತಾ ತಮ್ಮ ಕಾಲಿನ ಹೆಬ್ಬೆರಳನ್ನು ನೆಲಕ್ಕೆ ತಾಗಿಸಿ, ಮಣ್ಣಿನ ಮೇಲ್ಭಾಗವನ್ನು ಸ್ವಲ್ಪ ಕದಡಿದ್ದರಿಂದ ಅಲ್ಲಿ ಪವಿತ್ರವಾದ, ತಿಳಿಯಾದ ಕುಡಿಯೂವ ನೀರಿನ ಕಾರಂಜಿ ಉಂಟಾಯಿತು ಎನ್ನುವ ಪ್ರತೀತಿ. ಇದರಿಂದಾಗಿ ಇ ಪವಿತ್ರ ಸ್ಥಳಕ್ಕೆ "ನಾನಕ ಝೀರ" ಎಂದು ಹೆಸರಿಡಲಾಗಿದೆ. ಇಂದಿಗೂ ಇಲ್ಲಿ ಸತತವಾಗಿ ನೀರಿನ ಝರಿ ಹರಿಯುತ್ತದೆ. ಬಂದವರೆಲ್ಲ ಇ ನೀರನ್ನು ಸೇವಿಸುತ್ತಾರೆ. ಇದನ್ನು ತುಂಬಾ ಪವಿತ್ರ ಸ್ಥಳವೆಂದು ತಿಲಿಯಲಾಗಿದ್ದಲ್ಲದೆ, ಇ ನೀರನ್ನು ಸೇವಿಸುವುದರಿಂದ ನಮ್ಮ ಪಾಪ - ಕರ್ಮ ಗಳೆಲ್ಲವು ಕಳೆಯುವುದೆಂಬ ಪ್ರತೀತಿ ಇದೆ. ಇಲ್ಲಿಂದ ಹರಿದು ಬಂದ ನೀರನ್ನು ಗುರುದ್ವಾರದ ಮುಂದೆ ಇರುವ ಕಲ್ಯಾಣಿಗೆ ಬಿಡಲಾಗಿದೆ. ಇ ಕಲ್ಯಾಣಿಯಲ್ಲಿ ಭಕ್ತರು ಮಿಂದು ದೇವರ ದರ್ಶನ ಪಡೆಯುತ್ತಾರೆ . ದೇವಸ್ಥಾನದ ವಸತಿ ಗೃಹಗಳಿದ್ದು ಬಂದವರಿಗೆ ಉಳಿದುಕೊಳ್ಳಲು ಸೌಲಭ್ಯ ಕಲ್ಪಿಸಲಾಗಿದೆ.
ದೇವಸ್ಥಾನವು ತುಂಬಾ ಶುಚಿಯಾಗಿ ಮತ್ತು ಉತ್ತಮವಾಗಿ ನೋಡಿಕೊಳ್ಳಲಾಗಿದೆ. ದೇವಸ್ಥಾನ ಪ್ರದೇಶದ ಸುತ್ತಮುತ್ತಲು ತುಂಬಾ ಹಸಿರಿನ ವಾತಾವರಣವಿದ್ದು, ಇಲ್ಲಿ ನಿರ್ಮಿಸಲಾಗಿದ್ದ ಹೂದೋಟ ಮತ್ತು ಉದ್ಯಾನವನ ಪ್ರೇಕ್ಷಕರ ಮನಸೆಳೆಯುತ್ತದೆ.
ಮಾರ್ಗ: ಗುರುದ್ವಾರವು ಬೀದರನ ಉತ್ತರ ಭಾಗಕ್ಕೆ ನೆಲೆಸಿದ್ದು, KSRTC ಬಸ್ ನಿಲ್ದಾಣದಿಂದ ಸುಮಾರು 4km ದೂರದಲ್ಲಿದೆ. ಬಸ್ ನಿಲ್ದಾಣದ ಹೊರಗಡೆ ಸಿಗುವ ಆಟೋ ಮುಖಾಂತರ ಇಲ್ಲಿಗೆ ತಲುಪಬಹುದಾಗಿದೆ.
ನರಸಿಂಹ ಝೀರ:
ಭಾರತದಲ್ಲಿಯೇ ಅತೀ ವೈಶಿಷ್ಟ್ಯತೆ ಹೊಂದಿರುವ ದೇವಸ್ಥಾನವು ಇದಾಗಿದೆ. ಇದು ಶ್ರೀ ವಿಷ್ಣುವಿನ ಅವತಾರಗಳಲ್ಲೊಂದಾದ ನರಸಿಂಹ ಅವತಾರದ ದೇವಸ್ಥಾನವಾಗಿದೆ. ಇ ದೇವಸ್ಥಾನದ ವೈಶಿಷ್ಟ್ಯತೆ ಏನೆಂದರೆ ನರಸಿಂಹ ದೇವರ ದರ್ಶನ ಪಡೆಯಲು ಭಕ್ತಾದಿಗಳು ಸುಮಾರು 500m ಗಳಷ್ಟು ಅಂತರವನ್ನು ನಿರು ತುಂಬಿದ ಗುಹೆಯೊಳಗೆ ನಡೆದುಕೊಂಡು ಹೋಗಬೇಕಾಗುತ್ತದೆ . ಸುಮಾರು ೪ ಅಡಿ ಎತ್ತರದ ನಿರು ಯಾವಾಗಲು ಗುಹೆಯೊಳಗೆ ಹರಿಯುತ್ತಿರುತ್ತದೆ. ಒಳಗಡೆ ಗಾಳಿಯಾಡಲು ಪೈಪ್ ನ ವ್ಯವಸ್ಥೆ ಮಾಡಲಾಗಿದೆ. ಗುಹೆಯ ಎಲ್ಲ ಭಾಗದಲ್ಲೂ ಬಾವಲಿ (bat) ಗಳು ಅಂಟಿಕೊಂಡಿರುವುದುದಲ್ಲದೆ ಯಾರಿಗೂ ಏನು ಹಾನಿ ಉಂಟು ಮಾಡುವುದಿಲ್ಲ .ತುಂಬಾ ಜನ ಭಕ್ತಾದಿಗಳು ತಮ್ಮ ಕುಟುಂಬದೊಂದಿಗೆ ಇಲ್ಲಿಗೆ ಬಂದು ಮಡಿ ಉಟ್ಟು , ನೈವೇದ್ಯವನ್ನು ಮಾಡಿ ದೇವರಿಗೆ ಅರ್ಪಿಸುವುದು ವಿಶೇಷ.
ಇತಿಹಾಸ : ಹಿರಣ್ಯಕಶಪುವಿನ ವಧೆಯ ಬಳಿಕ ನರಸಿಂಹನು ಶಿವ ಭಕ್ತನು ಮತ್ತು ಅಸುರನು ಆದ "ಜಲಾಸುರ" ನ ವಧೆ ಮಾಡಲು ಬರುತ್ತಾನೆ. ಯುದ್ಧದ ಬಳಿಕ ಜಲಾಸುರನು ಸೋಲನ್ನೋಪ್ಪಿ, ಸಾವನ್ನೋಪ್ಪುವಾಗ ನರಸಿಂಹನ ಕಾಲು ಹಿಡಿದು ಇಲ್ಲಿಯೇ ವಾಸಮಾಡಿ ಬಂದ ಭಕ್ತರಿಗೆ ಆಶಿರ್ವಾದ ಮಾಡುವಂತೆ ವರ ಕೇಳಿ ಕೊಳ್ಳುತ್ತಾ ನರಸಿಂಹನ ಪಾದದಿಂದ ನೀರಾಗಿ ಹರಿಯಲು ಶುರುಮಾಡುತ್ತಾನೆ. ಅವನಿಗೆ ಕೊಟ್ಟ ಮಾತಿನಂತೆ ದೇವರು ಗುಹೆಯೊಳಗೆ ಐಕ್ಯವಾದರೆಂದು ಪ್ರತೀತಿ. ನರಸಿಂಹನ ಪಾದದಿಂದ ನೀರು ಸತತವಾಗಿ ಸುರಿಯುವುದರಿಂದಲೇ ಇ ಸ್ಥಳಕ್ಕೆ "ನರಸಿಂಹ ಝೀರ" ಎಂದು ಹೆಸರಿಡಲಾಗಿದೆ.
ಇ ಪವಿತ್ರವಾದ ಕ್ಷೇತ್ರದಲ್ಲಿ, 500m ನೀರಿನೊಳಗೆ ಗುಹೆಯಲ್ಲಿ ನಡೆದುಕೊಂಡು ಹೋಗಿ , ಹಸಿಯಾದ ಮೈಯಿಂದ ನರಸಿಂಹನ ದರ್ಶನ ಪಡೆದು ಭಕ್ತರು ಪಾವನರಾಗುತ್ತಾರೆ. ದೇವಸ್ಥಾನವು ಬೆಟ್ಟದ ಇಳಿ ಜಾರು ಪ್ರದೇಶದಲ್ಲಿ ನಿರ್ಮಿಸಲಾಗಿರುವುದು ಇನ್ನೊಂದು ವಿಶೇಷ.
ಮಾರ್ಗ: ನರಸಿಂಹ ಝೀರ ದೇವಸ್ಥಾನವು ಬೀದರನ ಪೂರ್ವ ಭಾಗಕ್ಕೆ ನೆಲೆಸಿದ್ದು, KSRTC
ಬಸ್ ನಿಲ್ದಾಣದಿಂದ ಸುಮಾರು 10km ದೂರದಲ್ಲಿದೆ. ಬಸ್ ನಿಲ್ದಾಣದ ಹೊರಗಡೆ ಸಿಗುವ ಆಟೋ
ಮುಖಾಂತರ ಇಲ್ಲಿಗೆ ತಲುಪಬಹುದಾಗಿದೆ. ಅಲ್ಲದೆ ಸಿಟಿ ಬಸ್ ಗಳ ಮುಖಾಂತರ ಕೂಡ
ತಲುಪಬಹುದಾಗಿದೆ.
ಬೀದರ್ ಕೋಟೆ :
ಬೀದರ್ ಕೋಟೆಯು ಭಾರತದ ಬಹು ದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ಇಲ್ಲಿ ಅತಿಯಾಗಿ ಬಹುಮನಿ ಸುಲ್ತಾನರು ಆಳ್ವಿಕೆ ಮಾಡಿದ್ದರಿಂದ ಇಲ್ಲಿ ಪರ್ಷಿಯನ್ ಕಲೆಗಳು ತುಂಬಾ ನೋಡಲು ಸಿಗುತ್ತವೆ. ಕೋಟೆಯ ಅದರ ಒಳ ಭಾಗದಲ್ಲಿರುವ ಅದರ ಬಣ್ಣ-ಬಣ್ಣದ ಗೋಡೆಗಳಿಂದ ಜಗತ್ಪ್ರಸಿದ್ಧಿಯಾಗಿದೆ. ಬಹುಮನಿ ಸುಲ್ತಾನರ ರಾಜಧಾನಿಯಾಗಿದ್ದ ಸಂಧರ್ಭದಲ್ಲಿ ನಿರ್ಮಾಣವಾಗಿದ್ದ ಮಸ್ಜಿದಗಳು - ಮಹಲುಗಳು ಅವುಗಳ ಕಟ್ಟಡಗಳ ಶೈಲಿಯಿಂದ ವಿಶ್ವ ವಿಖ್ಯಾತಿಯನ್ನು ಪಡೆದಿವೆ.
ರಂಗಿನ ಮಹಲ್ :- ಬಣ್ಣ -ಬಣ್ಣದ ಗೋಡೆಗಳಿಂದ ನಿರ್ಮಿಸಿದ ಕಟ್ಟಡ.
ತರ್ಕಶ್ ಮಹಲ್ :- ಮಹಾರಾಜನು , ಟರ್ಕಿಯ ಮಹಾರಾಣಿಗೋಸ್ಕರ ನಿರ್ಮಿಸಿದ ಕಟ್ಟಡ.
ಗಗನ್ ಮಹಲ್ :- ಬಹುಮನಿ ಸುಲ್ತಾನರು ಮೊದಲಾಗಿ ಕಟ್ಟಿದ ಕಟ್ಟಡವನ್ನು ಬರಿದಷಾ ಸುಲ್ತಾನರು ಅಧಿಕಾರಕ್ಕೆ ಬಂದ ನಂತರ ಇನ್ನಷ್ಟು ಅಭಿವೃದ್ಧಿ ಪಡಿಸಿದ ಕಟ್ಟಡ.
ತಖ್ತ್ ಮಹಲ್ :- ಬಹುಮನಿ ಸುಲ್ತಾನರ ಮಹಾರಾಜನು ವಾಸವಾಗುತ್ತಿದ್ದ ಕೊಠಡಿ ಎಂದು ಗುರುತಿಸಲಾಗುತ್ತದೆ.
ಮದರಸಾ ಆಫ್ ಮೊಹಮ್ಮದ ಗವಾನ್ :- ಇದು ಖ್ವಾಜಾ ಮೊಹಮ್ಮದ್ ಗವಾನ್ ರು ನಿರ್ಮಿಸಿದ ಆಗಿನ ಕಾಲದ ವಿಶ್ವ ವಿದ್ಯಾಲಯ. ಇಲ್ಲಿ ವಿದ್ಯಾರ್ಥಿಗಳಿಗೆ ಪರ್ಷಿಯನ್ ಮತ್ತು ಅರೇಬಿಕ್ ಭಾಷೆಗಳನ್ನು ಬೋಧನೆ ಮಾಡಲಾಗುತ್ತಿತ್ತು. ಇಲ್ಲಿ ಉಚಿತವಾಗಿ ಶಿಕ್ಷಣವನ್ನು ಕೊಡಲಾಗುತ್ತಿತ್ತು ಅಲ್ಲದೆ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿತ್ತು.
ಚೌಬಾರಾ :- ಇದು ಬೀದರ್ ನ ಮಧ್ಯ ಭಾಗದಲ್ಲಿ ನಿರ್ಮಿಸಲಾದ ಉದ್ದನೆಯ ಚತುರ್ಮುಖದ ಕಲ್ಲಿನ ಗೋಪುರ. ನಾಲ್ಕು ದಿಕ್ಕಿಗೆ ಗಡಿಯಾರವನ್ನು ಅಳವಡಿಸಲಾಗಿರುತ್ತದೆ.
ಸೋಲಾ ಖಂಬಾ ಮಸ್ಜಿದ್ :- ಇ ಕಟ್ಟಡವು ವಿಶಿಷ್ಟವಾಗಿದ್ದು 16 ಖಂಬಗಳನ್ನು ಹೊಂದಿದೆ. ಹಾಗಾಗಿ ಇದನ್ನು ಸೋಲಾ ಖಂಬಾ ಮಸ್ಜಿದ್ ಎಂದು ಕರೆಯಲಾಗುತ್ತದೆ.
ಮಾರ್ಗ: ಕೋಟೆಯು ಬೀದರ್ ನ ಪೂರ್ವ ಭಾಗದಲ್ಲಿದ್ದು KSRTC ಬಸ್ ನಿಲ್ದಾಣದಿಂದ ಆಟೋ ಮುಖಾಂತರ ಅಥವಾ ಬಸ್ ಮುಖಾಂತರ ತಲುಪಬಹುದಾಗಿದೆ.
ಪಾಪನಾಶ ದೇವಸ್ಥಾನ :
ದೇವಸ್ಥಾನಗಳ ನಗರಿಯಾದ ಬಿದರನಲ್ಲಿ ಪಾಪನಾಶ ದೇವಸ್ಥಾನವು ಒಂದು. ಇಲ್ಲಿನ ಶಿವಲಿಂಗದ ದರ್ಶನ ಪಡೆಯಲು ತುಂಬಾ ಭಕ್ತಾದಿಗಳು ಬರುತ್ತಿರುತ್ತಾರೆ. ಭಕ್ತಾದಿಗಳು ಇಲ್ಲಿ ಶಿವಲಿಂಗವನ್ನು ಮುಟ್ಟಿ ಪೂಜೆ ಮಾಡ ಬಹುದಾಗಿದೆ. ಇಲ್ಲಿ ಪಾಪ ವಿನಾಶಿನಿ ಎನ್ನುವ ಕೊಳ ಇರುವುದರಿಂದ ಇ ಸ್ಥಳಕ್ಕೆ ಪಾಪನಾಶ ಎನ್ನುವ ಹೆಸರಿಡಲಾಗಿದೆ ಎನ್ನುವ ಪ್ರತೀತಿ.
ಇತಿಹಾಸ : ಇಲ್ಲಿನ ಶಿವಲಿಂಗವನ್ನು ತ್ರೇತಾ ಯುಗದಲ್ಲಿ ಶ್ರೀ ರಾಮನು ಲಂಕೆಯಿಂದ ಹಿಂತಿರುಗುವಾಗ ಸ್ಥಾಪಿಸಲಾಗಿದೆ ಎನ್ನುವುದು ಇತಿಹಾಸ. ಇಲ್ಲಿನ ಪಾಪ ವಿನಾಶಿನಿ ಕೊಳಕ್ಕೆ ತುಂಬಾ ಇತಿಹಾಸವಿದೆ.ಇ ಕಲ್ಯಾಣಿಯು ಗುರು ನರಸಿಂಹ ಸರಸ್ವತಿಯವರು ಭೇಟಿಯಾದಾಗ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇ ಕೊಳದಲ್ಲಿ ಸ್ನಾನ ಮಾಡುವುದರಿಂದ ಆತ್ಮ ಶುದ್ಧಿ ಯಾಗುತ್ತದೆ ಎಂದು ನಂಬಿಕೆ.
ಮಾರ್ಗ: ಪಾಪನಾಶ ದೇವಸ್ಥಾನವು ಬೀದರನ ಪಶ್ಚಿಮ ಭಾಗಕ್ಕೆ ನೆಲೆಸಿದ್ದು, KSRTC ಬಸ್ ನಿಲ್ದಾಣದಿಂದ ಸುಮಾರು 4km ದೂರದಲ್ಲಿದೆ. ಬಸ್ ನಿಲ್ದಾಣದ ಹೊರಗಡೆ ಸಿಗುವ ಆಟೋ ಮುಖಾಂತರ ಇಲ್ಲಿಗೆ ತಲುಪಬಹುದಾಗಿದೆ. ಅಲ್ಲದೆ ಸಿಟಿ ಬಸ್ ಗಳ ಮುಖಾಂತರ ಕೂಡ ತಲುಪಬಹುದಾಗಿದೆ.
ಇದಲ್ಲದೆ ದೇವದೇವ ವನ - ಉದ್ಯಾನವನ , ಬರಿದ ಶಾಹಿ ಉದ್ಯಾನವನ, ಮೈಲಾರ ಮಲ್ಲಣ್ಣ, ಕಾರಂಜಾ ಆಣೆಕಟ್ಟು, ಸಿದ್ದಾರುಢ ಮಠ ಮುಂತಾದ ಪ್ರೇಕ್ಷಣಿಯ ಸ್ಥಳಗಳು ಇರುವುದುಂಟು.
ಹುಮನಾಬಾದ್ :-
ಹುಮನಾಬಾದ್ , ಬೀದರ್ ಜಿಲ್ಲೆಯ ಒಂದು ತಾಲೂಕು ಪ್ರದೇಶವಾಗಿದೆ. ಬೀದರ್ ಮತ್ತು ಗುಲ್ಬರ್ಗಾ ಮದ್ಧ್ಯೆ ಬರುವ ರಾಷ್ಟೀಯ ಹೆದ್ದಾರಿ 9 ರಲ್ಲಿ ಹುಮನಾಬಾದ್
ನೆಲೆಸಿರುತ್ತದೆ . ಗುಲ್ಬರ್ಗಾ ಇಂದ ಸುಮಾರು 62km ದೂರದಲ್ಲಿದ್ದು ಬಸ್ ಮುಖಾಂತರ
ಇಲ್ಲಿಗೆ ತಲುಪಬಹುದು . ಬೀದರ್ ನಿಂದ ಸುಮಾರು 60km ಗಳ ದೂರದಲ್ಲಿದ್ದು ರೈಲು ಅಥವಾ ಬಸ್
ಮುಖಾಂತರ ತಲುಪಬಹುದಾಗಿದೆ.
ಮಾಣಿಕನಗರ : ಮಾಣಿಕನಗರವು , ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನಲ್ಲಿರುವ ಸಣ್ಣ ಹಳ್ಳಿ.
ಮಾಣಿಕನಗರದಲ್ಲಿ , ಮಾಣಿಕಪ್ರಭುಗಳ ದಿವ್ಯ ಸಮಾಧಿಯ ದೇವಸ್ಥಾನವಿದೆ. ಇವರು ಮಹಾನ್ ಸಂತರಾಗಿದ್ದರು. ಇವರನ್ನು ದತ್ತಾತ್ರೇಯ ಅವತಾರವೆಂದು ಕೂಡ ತಿಳಿಯಲಾಗುತ್ತದೆ . ಇವರ ದಿವ್ಯ ಸಮಾಧಿಗೆ ಭವ್ಯವಾದ ಮಂದಿರವನ್ನು ನಿರ್ಮಿಸಲಾಗಿದೆ. ವರ್ಷದಲ್ಲಿ 2 ಬಾರಿ ಜಾತ್ರೆ ನಡೆಸಲಾಗುತ್ತದೆ. ದೇಶ-ವಿದೇಶಗಳಿಂದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷ . ಇಲ್ಲಿ ಸಂಸ್ಕೃತ ಶಾಲೆಯಿದ್ದು ಬ್ರಾಹ್ಮಣ ಮಕ್ಕಳಿಗೆ ಉಚಿತ ವಸತಿ ಜೊತೆಗೆ ಸಂಸ್ಕೃತ ವಿಧ್ಯಾಭ್ಯಾಸವನ್ನು ಕಲ್ಪಿಸಲಾಗುತ್ತದೆ.
ಭೇಟಿ ನೀಡಲು ಬಂದ ಪ್ರವಾಸಿಗರಿಗೆ ಉಳಿಯಲು ವಸತಿ ಗೃಹಗಳ ಸೌಲಭ್ಯವನ್ನು ದೇವಸ್ಥಾನದಿಂದಲೇ ಕಲ್ಪಿಸಲಾಗುತ್ತದೆ. ಇದು ಪ್ರವಾಸಿಗರು ಭೇಟಿ ನೀಡಿ ದೇವರ ಅನುಗ್ರಹ ಪಡೆಯಲು ಉತ್ತಮ ಸ್ಥಳವಾಗಿದೆ.
ವಿರಭದ್ರೆಶ್ವರ ದೇವಸ್ಥಾನ :
ಹುಮನಾಬಾದ್ ನಗರ ದೇವರೆಂದೇ ಪ್ರಸಿದ್ಧಿಯಾಗಿದೆ ಅಲ್ಲಿನ ವಿರಭದ್ರೆಶ್ವರ ದೇವಸ್ಥಾನ. ಪ್ರತಿ ವರ್ಷವೂ ಜನೆವರಿ 26 ರಂದು ಜಾತ್ರೆ ನಡೆಸಲಾಗುತ್ತದೆ. ದೇಶದ ಮೂಲೆ -ಮೂಲೆ ಗಳಿಂದ ಜನರು ಬರುತ್ತಾರೆ . ವಿಜೃಂಭಣೆ ಯಿಂದ ದೇವರ ಉತ್ಸವ ಮೂರ್ತಿಯನ್ನು ನಗರದ ಬಿದಿ-ಬೀದಿಗಳಲ್ಲಿ ಮೆರೆಸಲಾಗುತ್ತದೆ. ಇ ದೇವಸ್ಥಾನವು 16ನೇ ಶತಮಾನದಲ್ಲಿ ಚೋಳರು ನಿರ್ಮಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ದೇವಸ್ಥಾನದ ಶಿಖರದ ಕರಕುಶಲತೆಯು ನೋಡುಗರ ಮನ ಸೆಳೆಯುತ್ತದೆ.
ಬಸವಕಲ್ಯಾಣ :-
ಬಸವಕಲ್ಯಾಣವು ಬೀದರ ಜಿಲ್ಲೆಯ ಒಂದು ತಾಲೂಕು ಅಲ್ಲದೆ ಐತಿಹಾಸಿಕ , ಪ್ರೇಕ್ಷಣಿಯ , ಧಾರ್ಮಿಕ ಕ್ಷೇತ್ರವಾಗಿದೆ. ಇದಕ್ಕೆ 12ನೆ ಶತಮಾನದಿಂದ ಇತಿಹಾಸವಿದೆ . ಇದು ಸಂತ ಶರಣರ ನಾಡು ಎಂದೇ ಪ್ರಸಿದ್ಧಿಯಾಗಿದೆ. 12ನೆ ಶತಮಾನದಲ್ಲಿ ವಚನ ಸಾಹಿತ್ಯದ ಕ್ರಾಂತಿಯನ್ನೇ ಸಾರಿದರು ವಿಶ್ವಗುರು ಬಸವಣ್ಣನವರು.
ಅನುಭವ ಮಂಟಪ, ಬಸವಣ್ಣನವರ ದೇವಸ್ಥಾನ, ಬಿಜ್ಜಳನ ಕೋಟೆ (ಕಲ್ಯಾಣದ ಚ್ಯಾಲುಕ್ಯರು), ಗವಿಗಳು ಅಲ್ಲದೆ ಮಾತೆ ಮಹಾದೇವಿ ಯವರ ಬಸವ ಮಂಟಪವು ಜಗತ್ಪ್ರಸಿದ್ಧಿಯಾಗಿದೆ. ಬಿಜ್ಜಳನ ರಾಜಧಾನಿಯಾದ ಕಲ್ಯಾಣವನ್ನು ವಿಶ್ವಗುರು ಬಸವಣ್ಣನವರ ಜಗತ್ಪ್ರಸಿದ್ಧಿಯಿಂದಾಗಿ ಬಸವಕಲ್ಯಾಣ ಎಂದು ಮಾಡಲಾಗಿದೆ.
ಮಾರ್ಗ : ಬಸವಕಲ್ಯಾಣವು ರಾಷ್ಟೀಯ ಹೆದ್ದಾರಿ 9ರಿಂದ 5km ದೂರದಲ್ಲಿದೆ. ಹುಮನಾಬಾದ್ ನಿಂದ ಸುಮಾರು 30km ದೂರದಲ್ಲಿದ್ದು ಬಸ್ ಮತ್ತು ಜೀಪ್ ಗಳ ಮುಖಾಂತರ ತಲುಪಬಹುದಾಗಿದೆ.
ಅನುಭವ ಮಂಟಪ:
ಇದು ಬಸವಣ್ಣನವರ ಕಾಲದಲ್ಲಿ ಸಂತ-ಶರಣರು ಸಭೆ ಸೇರುತ್ತಿದ್ದ ಸ್ಥಳ. ಇದನ್ನು ಜಗತ್ತಿನ ಮೊಟ್ಟ ಮೊದಲ ಪಾರ್ಲಿಮೆಂಟ್ ಎಂದು ಕೂಡ ಪರಿಗಣಿಸಲಾಗುತ್ತದೆ. ಶರಣರೆಲ್ಲರು ಇಲ್ಲಿಗೆ ಬಂದು ತಮ್ಮ-ತಮ್ಮ ವಿಚಾರಗಳನ್ನೂ ಚರ್ಚಿಸುತ್ತಿದ್ದರು. ಶಿವಲಿಂಗದ ಆಕರದಲ್ಲಿ ಇದನ್ನು ಕಟ್ಟಲಾಗಿದೆ. ಒಳಗೊಡೆಗಳ ಮೇಲೆ ಎಲ್ಲಾ ಶರಣರ ಚಿತ್ರಗಳನ್ನು ಬಿಡಿಸಿ ಶರಣರ ಪರಿಚಯವನ್ನು ನೀಡಲಾಗುತ್ತಿದೆ. ಪಕ್ಕದಲ್ಲಿಯೇ ಶಿವಶರಣ ಹರಳಯ್ಯನವರ ಕೆರೆ ಇದ್ದು ಪ್ರವಾಸಿಗರಿಗೆ ಭೇಟಿ ನೀಡಲು ಒಳ್ಳೆಯ ತಾಣವಾಗಿದೆ. ಬಸವಕಲ್ಯಾಣ ಪ್ರವೇಶಿಸುತ್ತಿನ್ದದಂತೆಯೇ ಎಡ ಭಾಗಕ್ಕೆ ಗಿಡಗಳ ಮಧ್ಯೆ ಶಿವಲಿಂಗವು ಕಾಣಿಸುತ್ತಿರುತ್ತದೆ.
ಬಸವ ಮಂಟಪ :
ಇದು ಮಾತೆ ಮಹಾದೆವಿಯವರು ಕಟ್ಟಿಸಿದ ಬಸವ ಮೂರ್ತಿ. ಇಲ್ಲಿ ವಿಶ್ವದಲ್ಲಿಯೇ ಅತಿ ಎತ್ತರವಾದ ಸುಮಾರು 108 ಅಡಿಗಳ ಎತ್ತರದ ಬಸವಣ್ಣನ ಮೂರ್ತಿಯನ್ನು ಸ್ಥಾಪಿಸಲಾಗಿದ್ದು, ಬಸವಕಲ್ಯಾಣದ ಪ್ರೇಕ್ಷಣಿಯ ಮತ್ತು ಆಕರ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ . ಬಸವಕಲ್ಯಾಣ ಪ್ರವೇಶಿಸುತ್ತಿದ್ದಂತೆಯೇ ಬಲ ಭಾಗಕ್ಕೆ ಬಯಲು ಜಾಗದಲ್ಲಿ ಬಸವ ಮೂರ್ತಿಯು ಕಾಣಿಸುತ್ತದೆ. ಸಂತ-ಶರಣರ ಮೂರ್ತಿಗಳನ್ನು ಸ್ಥಾಪಿಸುವುದರ ಜೊತೆಗೆ ಬಸವ ಮೂರ್ತಿಯ ಕೆಳಗಡೆ ಧ್ಯಾನ ಮಂದಿರವನ್ನು ಸ್ಥಾಪಿಸಲಾಗಿದೆ . ಇದಲ್ಲದೆ ತೆಳ್ಳಿನ ಪ್ರದೇಶವನ್ನು ಕೊರೆದು ಶರಣರ ಗವಿಗಳನ್ನು ನಿರ್ಮಿಸಲಾಗುತ್ತಿದೆ. ಬಸವ ಮೂರ್ತಿಯ ಸುತ್ತಮುತ್ತ ಸಣ್ಣ ಉದ್ಯಾನವನವನ್ನು ನಿರ್ಮಿಸಲಾಗಿದ್ದು ತಂಪಾದ ವಾತಾವರಣ ಹೊಂದಿರುತ್ತದೆ.
ಬಿಜ್ಜಳನ ಕೋಟೆ :
ಕಲ್ಯಾಣದಲ್ಲಿ ಚ್ಯಾಲುಕ್ಕ್ಯರು ಆಳ್ವಿಕೆ ಮಾಡುವಾಗ , ಕಲ್ಯಾಣವನ್ನು ಚ್ಯಾಲುಕ್ಯರ ರಾಜಧಾನಿಯನ್ನಾಗಿ ಮಾಡಿದ್ದರು. 12ನೆ ಶತಮಾನದಲ್ಲಿ ಬಿಜ್ಜಳನು ಕಳಚುರಿಯರ ಪ್ರಬಲ ರಾಜನಾಗಿದ್ದನು. ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನ ಮಂತ್ರಿಗಳಾಗಿದ್ದರು. ಇಂದಿಗೂ ಕೋಟೆಯೊಳಗೆ ಅಳಿದುಳಿದ ಅವಶೇಷಗಳನ್ನು ಕಾಣಬಹುದಾಗಿದೆ. ಕೋಟೆಯ ಮುಂಭಾಗದಲ್ಲಿ ಸಂಗ್ರಾಲಯವಿದ್ದು ಒಂದಿಷ್ಟು ರಾಜರ ಕಾಲದ ಆಯುಧಗಳನ್ನು ಸಂಗ್ರಹಿಸಿಡಲಾಗಿದೆ.
ಬಸವಣ್ಣನವರ ದೇವಸ್ಥಾನ :
ಬಸವಕಲ್ಯಾಣದ ಮಧ್ಯ ಭಾಗದಲ್ಲಿ ಬಸವಣ್ಣನವರ ಭವ್ಯ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಬಸವ ಜಯಂತಿ ಯಂದು ಜಾತ್ರೆ ಮಾಡಲಾಗುತ್ತದೆ. ಭಾರಿ ಸಂಖೆಯಲ್ಲಿ ಭಕ್ತರು ಸೇರುವುದಲ್ಲದೆ ಬಸವಣ್ಣನವರ ಮೂರ್ತಿಯನ್ನು ನಗರದ ಭವ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ದೇವಸ್ಥಾನದ ಗೋಡೆಗಳ ಮೇಲೆ ಬಸವಣ್ಣನವರ ಜೀವನ ಚರಿತ್ರೆಯನ್ನು ಚಿತ್ರಿಸಲಾಗಿದೆ. ದೇವಸ್ಥಾನದಲ್ಲಿ, ಬಸವಣ್ಣನವರ ಹೆಸರಿನಲ್ಲಿ ದಿನವು ದಾಸೋಹ ಅಂದರೆ ನಿತ್ಯ ಅನ್ನ ಸಂತರ್ಪಣೆ ಮಾಡಲಾಗುತ್ತದೆ.
ಇದಲ್ಲದೆ ಸದಾನಂದ ಸ್ವಾಮಿಯವರ ಮಠ, ಖಾಜಾ ಬಂದೆ ನವಾಜ್ ದರ್ಗಾ, ಬಸವ ಗ್ರಂಥಾಲಯ, ಬಂದವರ ಓಣಿ, ನಾರಾಯಣಪುರ ಮತ್ತು ಶಿವಪುರದ ದೇವಸ್ಥಾನಗಳು ಇವೆಲ್ಲವೂ ಬಸವಕಲ್ಯಾಣದ ಐತಿಹಾಸಿಕ ಮತ್ತು ಪ್ರವಾಸಿಗರ ಆಕರ್ಷಣಿಯ ಸ್ಥಳಗಳಾಗಿವೆ.
ಅಮೃತ ಕುಂಡ : ಹುಮನಾಬಾದ್ ನಿಂದ ಪುಣೆಯ ಕಡೆಗೆ ರಾಷ್ಟೀಯ ಹೆದ್ದಾರಿ 9 ರಲ್ಲಿ ಸುಮಾರು 40km ದೂರ ಕ್ರಮಿಸಿದರೆ ಎಡಗಡೆ ಅಮೃತ ಕುಂಡ ಎಂಬ ದೇವಸ್ಥಾನ ಸಿಗುತ್ತದೆ. ಬೆಟ್ಟಗಳ ಮಧ್ಯದಲ್ಲಿ ಶ್ರೀ ರಾಮನು ನಿರ್ಮಿಸಿದ ಶಿವಲಿಂಗವಿದೆ. ಸದಾ ನಿರು ಹರಿಯುತ್ತಿರುವ 2 ಕಲ್ಯಾಣಿಗಳಿವೆ. ಇ ಕಲ್ಯಾಣಿಯಿಂದ ಹರಿಯುವ ನಿರು ಮುಲ್ಲಾಮಾರಿ ಎಂಬ ನದಿಯ ಉಗಮ ಸ್ಥಾನವಾಗಿದೆ.
ಇತಿಹಾಸದ ಪ್ರಕಾರ ಇಲ್ಲಿನ ಶಿವಲಿಂಗವು ಶ್ರೀ ರಾಮನು ಸೀತೆಯನ್ನು ಕರೆದುಕೊಂಡು ಹಿಂತಿರುಗುವಾಗ ಸ್ಥಾಪಿಸಲಾಗಿದೆ ಎಂದು ತಿಳಿಸಲಾಗುತ್ತದೆ. ಅಲ್ಲದೆ ಇಲ್ಲಿನ ಕಲ್ಯಾಣಿಗಳಲ್ಲಿ ವಿವಿಧ ತರಹದ ಜಲಚರ ಪ್ರಾಣಿಗಳಿರುವುದು ವಿಶೇಷ. ಆಮೇ , ಮೀನುಗಳು, ಹಾವುಗಳು ಎಲ್ಲವು ಕಲ್ಯಾಣಿಯಲ್ಲಿ ಕಂಡುಬರುತ್ತವೆ. ವಿಷ್ಣುವು ಮೋಹಿನಿಯ ಅವತಾರದಲ್ಲಿ ಅಮೃತವನ್ನು ಹಿಡಿದುಕೊಂಡು ಹೋಗುತ್ತಿರುವಾಗ ಅದರ ಒಂದು ಹನಿಯು ಇಲ್ಲಿ ಬಿದ್ದು ಕಲ್ಯಾಣಿಯಾಗಿದೆ ಎಂದು ನಂಬಿಕೆ. ಹೀಗಾಗಿಯೇ ಇದನ್ನು ಅಮೃತಕುಂಡ ಎಂದು ಕರೆಯಲಾಗುತ್ತದೆ.
ಮುಂತಾದ ಪ್ರೇಕ್ಷಣಿಯ , ಐತಿಹಾಸಿಕ , ಧಾರ್ಮಿಕ ಮತ್ತು ಪಾರಂಪರಿಕ ಸ್ಥಳಗಳನ್ನು ಹೊಂದುರಿವ ಬೀದರ್ ಜಿಲ್ಲೆಯು ಒಳ್ಳೆಯ ಪ್ರವಾಸಿ ತಾಣವಾಗಿದೆ.
3 comments:
very nice!!!
very nice and very informative Mahi!! got to many things about Bidar.
Good one Mahesh. Quite informative about the city. As I said you, though I visited Bidar recently I dint get all of the information you've described here.
Keep up your good work :)
Post a Comment